ಮೊದಲ ಬಾರಿ ಇಷ್ಟು ದೊಡ್ಡ ಕ್ಯಾಂಪಸ್ಸನ್ನು ನೋಡಿ ಒಮ್ಮೆ ಪುಕಪುಕ ಅಂದಿತ್ತು. ನನ್ನಲ್ಲಿ ಮೂಡಿದ ಬಹುದೊಡ್ಡ ಪ್ರಶ್ನೆ “ನಾನಿಲ್ಲಿ ಸರ್ವೈವ್ ಆಗೀನಾ?” ಅನ್ನೋದು. ಒಬ್ಬರೂ ಪರಿಚಯವಿಲ್ಲದ ಊರಿನಲ್ಲಿ ಮೂರು ವರ್ಷ ಕಳೆಯಬೇಕಲ್ಲ ಎನ್ನುವ ಅಂಜಿಕೆ.
***
ಇವತ್ತು ಮೂರು ವರ್ಷದ ಡಿಗ್ರೀ ಜೀವನದ ಕೊನೆಯ ಪರೀಕ್ಷೆ. ಎಸ್‌ಡಿಎಂಗೆ ಸೇರಿ ಮೂರು ವರ್ಷಗಳಾಯಿತಂತೆ! ಮೊನ್ನೆ ಮೊನ್ನೆಯಷ್ಟೇ ಬೆಳಿಗ್ಗೆ ಬೆಳಿಗ್ಗೆ ಆನ್ನೈನ್ ಕ್ಲಾಸಿಗೆ ಕೂರುತ್ತಾ ಇದ್ದ ನೆನಪು. ಇಂದು ಆರನೇ ಸೆಮಿಸ್ಟರ್ ಎಕ್ಸಾಮ್ ಬರೆದು ಮುಂದಿನ ಪಯಣಕ್ಕೆ ಬಸ್ಸು ಹತ್ತುವುದಷ್ಟೇ ಬಾಕಿ. ಕೆಲವರು ಜಾಬಿಗೆ, ಹಲವರು ಮುಂದಿನ ಅಧ್ಯಯನಕ್ಕೆ, ಇನ್ನೂ ಒಂದಿಷ್ಟು ಜನರ ದಾರಿ ನಿರ್ಧಾರವಾಗಬೇಕಷ್ಟೇ. ವಿದಾಯ ಅದೆಷ್ಟು ಕಷ್ಟ ಅಲ್ವಾ. ಉಜಿರೆಯ ಬೀದಿಗಳು, ಕ್ಯಾಂಪಸ್ಸು, ಕಾರಿಡಾರು, ಮೆಟ್ಟಿಲುಗಳು ಎಲ್ಲದಕ್ಕೂ ನಾವು ಅದೆಷ್ಟು ಬೇಗ ಆಪ್ತವಾಗಿಬಿಡುತ್ತೇವೆ ಅನ್ನುವುದೇ ಗೊತ್ತಾಗುವುದಿಲ್ಲ, ಇನ್ನು ಯಾವುದೋ ಹೊಸ ಊರು, ಹೊಸ ಜನ, ಹೊಸ ಬದುಕು.
How lucky is to have a great journey that makes it so hard to say goodbye.
ಕ್ಯಾಂಟೀನ್ ನಲ್ಲಿ ಕೂತು ನಡೆಸುತ್ತಿದ್ದ ಹರಟೆ ಕಮ್ಮಟಗಳು, ಚಂದದ ಕ್ಯಾಂಪಸ್ಸು ಕಣ್ಣಿಗೆ ಮುದ ಕೊಡುವ ಕ್ರಶ್‌ಗಳು, ಹತ್ತಿರವಾದ ಸ್ನೇಹಿತರ ಬಳಗ, ಉಜಿರೆಯ ಬೀದಿಗಳು, ಬಂಕ್ ಹಾಕಿದ ಕ್ಲಾಸುಗಳು, ಕಾಲೇಜು ಫೆಸ್ಟುಗಳು, ಸ್ನೇಹಿತರಿಗೆ ಕೊಡುತ್ತಿದ್ದ ಕೀಟಲೆ, ಮುಗಿಯದ ಅಸೈನ್‌ಮೆಂಟುಗಳು, ಎಕ್ಸಾಮ್ ಹಿಂದಿನ ದಿನ ಓದಿ ಪಾಸಾಗುತ್ತಿದ್ದ ಪರೀಕ್ಷೆಗಳು, ಮಧ್ಯರಾತ್ರಿಯ ವಾಕಿಂಗು, ದಿಶಾ ಹೋಟೇಲಿನ ಕಾಶ್ಮೀರಿ ಪಲಾವು. ಒಮ್ಮೆಯೂ ಕಾಲಿಡದ ಕಾಫಿ ಡೇ ಹಾಗೂ ಓಷಿಯನ್ ಪರ್ಲ್ ಹೋಟೆಲ್ಲು, ಲಕ್ಷದೀಪೋತ್ಸವ.. ಉಜಿರೆಯ ಕಲರ್ ಫುಲ್ ಜೀವನ ನೆನಪುಗಳ ಮೂಟೆಯನ್ನೇ ಕಟ್ಟಿಕೊಟ್ಟಿದೆ. ಅನುಭವವನ್ನು ಹೆಚ್ಚಿಸಿದೆ. ಬದುಕನ್ನು ಕಲಿಸಿದೆ.
ದೋಣಿ ಸಾಗಲಿ, ಮುಂದಿನ ದಾರಿ ಎಲ್ಲರ ಬದುಕನ್ನು ಬೆಳಗಲಿ. ಸಿಗುತ್ತಿರೋಣ. ಹೇಳಲು ತುಂಬಾ ಬಾಕಿ ಇದೆ. ಸಧ್ಯಕ್ಕೆ ತೋಚಿದ್ದು ಇಷ್ಟು:)
ಚಂದನ
25. 07. 2023