ಶಾಲೆಯಲ್ಲಿ ಕೊನೆಯ ಬೆಲ್ ಹೊಡೆದ ತಕ್ಷಣ ಮನೆಗೆ ಬಂದು ಕೈಕಾಲು ತೊಳೆದು ಚುರ್ರ್ ಗುಡುವ ಹೊಟ್ಟೆಗೆ ಏನಾದರೂ ಇಳಿಸಿ ಅನಂತರ ತೋಟದ ಕಡೆ ಹೆಜ್ಜೆ ಹಾಕಿ ಮರ ಗಿಡಗಳನ್ನೆಲ್ಲಾ ಮಾತನಾಡಿಸುತ್ತಾ ತಿರುಗಾಡುವುದೆಂದರೆ ಅದೆಂತಹ ಸಂತಸ! ತೋಟದಲ್ಲಿ ನಮ್ಮ ಹಸಿರು ಕುಟುಂಬ ಬಹುದೊಡ್ಡದಿದೆ. ಮೊನ್ನೆ ಬಿತ್ತಿದ ಶೇಂಗಾ ಬೀಜ ಮೊಳಕೆಯೊಡೆದಿದೆ. ಅದು ಗಿಡವಾಗಿ ಇನ್ನಂಚೂರು ದೊಡ್ಡದಾಗಿ ಬೆಳೆಯಲು ಶುರುಮಾಡಿದ ಕೂಡಲೇ ಒಂದು ಬೇಲಿ ಹಾಕಿಬಿಡಬೇಕು.
ಓಹ್! ಏನು ಗೊತ್ತಾ? ಕಳೆದ ವರ್ಷ ನೆಟ್ಟ ಕಾಳುಮೆಣಸಿನ ಗಿಡ ಸೊಗಸಾಗಿ ಅಡಿಕೆ ಮರಕ್ಕೆ ಹಬ್ಬಿ ಕಳೆದ ವಾರವಷ್ಟೇ ಸಣ್ಣ ಸಣ್ಣ ಖರೆ ಬಿಡಲು ಪ್ರಾರಂಭಿಸಿದೆ. ಅದಕ್ಕೆ ಈಗ ಒಂದಿಷ್ಟು ಗೊಬ್ಬರ ತಂದು ಹಾಕಬೇಕು. ಕೊಟ್ಟಿಗೆಯ ಪಕ್ಕದ ಗೊಬ್ಬರ ಕುಳಿಯಿಂದ ಸ್ವಲ್ಪ ಮತ್ತು ಮೊನ್ನೆ ಅಪ್ಪ ಅಡಿಕೆ ಮರಕ್ಕೆಲ್ಲಾ ಹಾಕಲಿಕ್ಕೆ ತಂದಿಟ್ಟ ಅದ್ಯಾವ್ದೋ ಪೇಟೆ ಸಾವಯವ ಗೊಬ್ಬರ, ಎರಡನ್ನೂ ಸೇರಿಸಿ ಕಾಳುಮೆಣಸಿನ ಗಿಡಕ್ಕೆ ಹಾಕಬೇಕು. ಮೆಣಸಿನ ಖರೆ ಬಿಡಲು ಅದಕ್ಕೆ ಶಕ್ತಿ ಬೇಕಲ್ಲ! ತೋಟಕ್ಕೆ ಹೋದಾಗ ಇಂತಹ ಬಹಳಷ್ಟು ಮಾತುಕತೆ ಮನಸ್ಸಿನೊಳಗೇ ನಡೆಯುತ್ತಾ ಹೋಗುತ್ತದೆ.
ಮಲೆನಾಡಿನ ಹಳ್ಳಿಯಲ್ಲಿ ಹುಟ್ಟಿಬೆಳೆದ ನಮಗೆ ಹಸಿರು, ಪರಿಸರ, ಕಾಡು ಬೆಟ್ಟ ಬ್ಯಾಣ, ತೋಟ ಎಂದರೆ ಜೀವ. ನಾವೇ ಅದರ ಒಂದು ಚಿಕ್ಕ ಭಾಗವಲ್ಲವೇ? ಸಂಜೆಯ ಹೊತ್ತಿಗೆ ಅಜ್ಜನಮನೆಯ ಬ್ಯಾಣದ ಮೇಲೆ ಕೂತುಬಿಡಬೇಕು. ಪ್ರಕೃತಿ ಮಾತನಾಡುತ್ತದೆ. ತಂಪಾದ ಗಾಳಿಯ ಮೂಲಕ ಮರಗಳ ನಡುವಿನ ಚರಚರ ಶಬ್ದಗಳ ಮೂಲಕ. ಪ್ರಶಾಂತವಾದ ವಾತಾವರಣದ ನಡುವಿನ ಇಂತಹ ಹಸಿರ ಅಲೆಗಳು ಸೊಗಸಾದ ಸಂಗೀತ ಅನಿಸಿಬಿಡುತ್ತದೆ. ಅಲ್ಲೇ ಇನ್ನಷ್ಟು ಹೊತ್ತು ಕೂತುಬಿಡಬೇಕು ಎಂದು ಮನ ಹೇಳುತ್ತದೆ.
ಇನ್ನು ಕೊಟ್ಟಿಗೆಯೊಳಗಿನ ಪ್ರೀತಿಯ ಬಗ್ಗೆ ಹೇಳದೇ ಇದ್ದರೆ ಆದೀತೇ? ಅಲ್ಲಿನ ಪುಟಿಕರುವಿಗೆ ಈಗಷ್ಟೇ ಒಂದು ತಿಂಗಳು. ಅದೆಷ್ಟು ಮುದ್ದು ಮಾಡಬೇಕು ಅದಕ್ಕೆ? ಕೊಟ್ಟಿಗೆಯೊಳಗೆ ಹೊಕ್ಕ ತಕ್ಷಣ ಅದರ ಕಣ್ಣರಳುತ್ತದೆ. ತಕತಕ ಎಂದು ನಾಲ್ಕು ಕುಣಿತವನ್ನೂ ಹಾಕಿಬಿಡಬೇಕು. ಅಂಬಾ ಎನ್ನುವುದನ್ನು ಬಿಟ್ಟು ಅದಕ್ಕೆ ಇನ್ನೇನೂ ಹೇಳಲಿಕ್ಕೆ ಬಾರದು. ಆದರೆ ಅಲ್ಲಿ ಭಾವ ಮಾತನಾಡುತ್ತದೆ. ಮಾವನ ಕತೆ ಹೇಳುತ್ತದೆ. ಉಭಯ ಕುಶಲೋಪರಿ ನಡೆಯುತ್ತದೆ. ಮೈ ನೇವರಿಸಿದಷ್ಟೂ ಸಾಲದು. ಪುಟಿ ಕರುವನ್ನು ಮುದ್ದಾಡುತ್ತಿದ್ದರೆ, ʼಈಗ ನಾನು ಕಾಣುವುದಿಲ್ಲ ಅಲ್ವಾʼ ಎಂದು ಅದರ ಅಮ್ಮ ನನ್ನೆಡೆಗೆ ನೋಡಿ ಕರೆಯುತ್ತದೆ. ಅದಕ್ಕೂ ಒಂದಿಷ್ಟು ಮುದ್ದು ಮಾಡಬೇಕು. ಒಂದಿಷ್ಟು ಹುಲ್ಲು ತಂದು ಹಾಕಬೇಕು. ಯಾರಿಗೂ ಗೊತ್ತಾಗದಂತೆ ಚೀಲದಿಂದ ಒಂದಿಷ್ಟು ಹಿಂಡಿಯನ್ನು ತಂದುಕೊಡಬೇಕು.
ಹಸಿರು ತನ್ನೊಡಲೊಳಗೆ ಸಾಗರದಷ್ಟು ಪ್ರೀತಿಯನ್ನು ಹುದುಗಿಟ್ಟುಕೊಂಡು ಕೂತಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾ ಹೋದರೆ ಚಿಕ್ಕ ಚಿಕ್ಕ ವಿಷಯಗಳೂ ಖುಷಿ ನೀಡಬಲ್ಲವು. ತೋಟ, ಬ್ಯಾಣ, ಕೊಟ್ಟಿಗೆ ಹೀಗೆ ಎಲ್ಲಾ ಕಡೆ ಒಲವಿನ ಸೆಲೆಗಳಿವೆ. ಹಸಿರು ತನ್ನ ಮೌನದ ಮಲಕವೇ ನಮ್ಮನ್ನೆಲ್ಲಾ ನೇವರಿಸುತ್ತದೆ. ಝರಿಯ ಜುಳುಜುಳು, ಕೊಟ್ಟಿಗೆಯೊಳಗಿನ ಅಂಬಾ ಎಂಬ ಕೂಗು, ಹಕ್ಕಿಯ ಚಿಲಿಪಿಲಿ, ತಂಗಾಳಿಯ ಶಬ್ದ ಎಲ್ಲವೂ ಇಂಪಾಗಿ ಕೇಳುತ್ತದೆ. ಹಸಿರು ಮಾತಾಗುತ್ತದೆ.