ಛಾಯಾಗ್ರಹಣ ನನ್ನಿಷ್ಟದ ಹವ್ಯಾಸ. ಬಿಡುವಿದ್ದಾಗ ಕೈಯಲ್ಲಿ ಕ್ಯಾಮೆರಾ ಹಿಡಿದು ಹೊರಟರೆ ಬರುವಾಗ ಒಂದಿಷ್ಟು ಮುದ ಕೊಡುವ ದೃಶ್ಯಗಳು ಸೆರೆಯಾಗಿ ಬರುತ್ತವೆ. ಬಹಳಷ್ಟು ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನು ತಿಂಗಳುಗಟ್ಟಲೇ ನೋಡದೇ ಇರುವುದುಂಟು. ಹಸಿರು-ಪರಿಸರ ಮತ್ತು ಕ್ಯಾಂಡಿಡ್ ಫೋಟೋಗ್ರಾಫಿ ನನಗೆ ಇನ್ನಷ್ಟು ಖುಷಿ ಕೊಡುವಂತವು. ಮಲೆನಾಡಿನವರಾದ ನಮಗೆ ಪರಿಸರದ ಜೊತೆ ಅವಿನಾಭಾವ ಸಂಬಂಧ. ಕಣ್ಣು ತಿರುಗಿಸಿದಷ್ಟೂ ಚಂದದ ಚಿತ್ರಣಗಳು ಕಾಣಸಿಗುತ್ತದೆ.
ಮೊದಲೆಲ್ಲಾ ಫೋಟೋಗಳನ್ನು ತೆಗೆಯಬೇಕೆಂದರೆ ಕ್ಯಾಮೆರಾಗೆ ರೀಲ್‌ಗಳನ್ನು ಹಾಕಬೇಕಿತ್ತಂತೆ. ಸೀಮಿತ ಸಂಖ್ಯೆಯ ಫೋಟೋಗಳನ್ನು ಮಾತ್ರ ತೆಗೆಯಬಹುದಾಗಿದ್ದ ಆ ಕ್ಯಾಮೆರಾಗಳಲ್ಲಿ ರೀಲ್ ತುಂಬಿದಾಗ ಅದನ್ನು ಸ್ಟುಡಿಯೋಗೆ ಹೋಗಿ ಫೋಟೋ ತೊಳೆಸಿ ತರಬೇಕಾಗಿತ್ತಂತೆ. ಆಮೇಲೆ ಕಾಂಪ್ಯಾಕ್ಟ್ ಕ್ಯಾಮೆರಾಗಳು, ಡಿಎಸ್‌ಎಲ್‌ಆರ್‌ಗಳು ಬಂದವು. ಮೆಮೋರಿ ಕಾರ್ಡ್ ಫುಲ್ ಆಗುವಷ್ಟೂ ಫೋಟೋಗಳನ್ನು ತೆಗೆಯಬಹುದು. ಅದನ್ನೂ ನಾವೇ ನಮ್ಮ ಕಂಪ್ಯೂಟರ್ ಗೋ, ಲ್ಯಾಪ್ ಟಾಪ್ ಗಳಲ್ಲೋ ಸಂಗ್ರಹ ಮಾಡಿ ಇಡಬಹುದು. ಹಾಗಂತ ತಂತ್ರಜ್ಞಾನ ಅಷ್ಟಕ್ಕೇ ನಿಲ್ಲಲಿಲ್ಲ. ಮೊಬೈಲ್‌ಗಳಲ್ಲೂ ಉತ್ಕೃಷ್ಟ ಕ್ಯಾಮೆರಾಗಳು ಬರತೊಡಗಿದವು. ಈಗ ಚಂದದ ಫೋಟೋಗಳನ್ನು ತೆಗೆಯಲು ದೊಡ್ಡ ದೊಡ್ಡ ಕ್ಯಾಮೆರಾಗಳೇ ಬೇಕಾಗಿಲ್ಲ. ಏನಾದರೂ ಚಂದದ ದೃಶ್ಯ ಕಂಡಾಗ ಕಿಸೆಯಿಂದ ಮೊಬೈಲ್ ತೆಗೆದು ಕ್ಲಿಕ್ಕಿಸಿಬಿಡಬಹುದು. ಅದೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲೂಬಹುದು. ಹಾಗಂತ ಕ್ಯಾಮೆರಾಕ್ಕಿಂತ ಮೊಬೈಲೇ ಬೆಸ್ಟು ಅಂತ ನಾನು ಹೇಳ್ತಾ ಇಲ್ಲ. ಅದಕ್ಕೆ ಅದರದ್ದೇ ಆದ ಸಾಧಕ-ಭಾದಕಗಳಿವೆ. ಇರಲಿ ಬಿಡಿ.
ಒಂದು ಫೋಟೋದೊಂದಿಗೆ ಬಹಳಷ್ಟು ನೆನಪುಗಳು ತಳಕು ಹಾಕಿಕೊಂಡಿರುತ್ತದೆ. ಶಾಲೆ-ಕಾಲೇಜಿನ ಗ್ರುಪ್ ಫೋಟೋ, ಎಲ್ಲೋ ಪ್ರವಾಸಕ್ಕೆ ಹೋದಾಗ ತೆಗೆದ ಫೋಟೋ, ಮನೆಯ ಮದುವೆಯೋ-ಮುಂಜಿಯಲ್ಲಿಯೋ ತೆಗೆದ ಚಿತ್ರಗಳು ಎಲ್ಲದಕ್ಕೂ ಒಂದು ಕತೆಯಿದೆ. ಒಂದು ಬಾರಿ ಮನೆಯವರ ಜೊತೆ ಕೂತು ಹಳೆಯ ಆಲ್ಬಮ್ ಗಳನ್ನು ತೆರೆದು ಕೂತುಬಿಡಿ. ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಅಲ್ಲಿ ಚಿತ್ರಗಳು ಮಾತಾಡುತ್ತವೆ. ಸವಿನೆನಪುಗಳ ಹಂಚಿಕೆಯಾಗುತ್ತದೆ. “ಆ ದಿನ ಏನಾಗಿತ್ತು ಗೊತ್ತಾ?” ಎಂದು ಮಹಾಪುರಾಣ ಆರಂಭವಾಗುತ್ತದೆ. ಖುಷಿ ಹಂಷಿಕೆಯ ಮಾರುಕಟ್ಟೆ ಓಪನ್ ಆಗುತ್ತದೆ. ಮನೆ ಕಾಲದಲ್ಲಿ ಹಿಂದಕ್ಕೆ ಚಲಿಸುತ್ತದೆ.
ಕಾಲ ಅದೆಷ್ಟು ವೇಗವಾಗಿ ಚಲಿಸುತ್ತಿದೆ. ಕಾಲವನ್ನು ನಿಲ್ಲಿಸಲಿಕ್ಕಂತೂ ಸಮ್ಮಿಂದ ಸಾಧ್ಯವಿಲ್ಲ. ಆದರೆ ಇಂದಿನ ಜೀವನವನ್ನು ಚಿತ್ರಗಳ ಮೂಲಕ ಜೀವಂತವಾಗಿಸಬಹುದು. ಓಹ್! ಆವಾಗ ಜನಜೀವನ ಹೀಗಿತ್ತಾ ಎಂದು ಮುಂದೆ ಬರುವ ಜನರು ಉದ್ಗರಿಸಬಹುದು. ಇಂದು ಒಂದು ಚಿತ್ರದ ಬೆಲೆ ಗೊತ್ತಾಗದೇ ಇರಬಹುದು. ಮುಂದೊಂದು ದಿನ ನಮ್ಮದೊಂದು ಚಿತ್ರ ಇರಬಾರದಿತ್ತಾ ಎಂದೂ ಅನಿಸಬಹುದು. ಕಾಲವನ್ನು ದಾಖಲಿಸುವಲ್ಲಿ ಫೋಟೋಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನಾವು ನೋಡುತ್ತಾ ಹೋದಂತೆ ನಮ್ ಸುತ್ತಮುತ್ತಲೂ ಚಿತ್ರ ತೆಗೆಯಲು ಬಹಳಷ್ಟು ಸರಕುಗಳು ಕಾಣಸಿಗುತ್ತದೆ. ಒಬ್ಬೊಬ್ಬರದ್ದೂ ಪೋಟೋ ತೆಗೆಯುವ ರೀತಿ ಬೇರೆಯಾಗಬಹುದು. ಒಂದೇ ದೃಶ್ಯವನ್ನು ಬೇರೆ ಬೇರೆ ಛಾಯಾಗ್ರಾಹಕರು ವಿಶಿಷ್ಟ ರೀತಿಯಲ್ಲಿ ತೆಗೆಯಬಹುದು.
ಅಷ್ಟಕ್ಕೂ ಒಂದು ಚಿತ್ರ ಚೆನ್ನಾಗಿ ಬರಲು ಯಾವುದು ಕಾರಣವಾಗುತ್ತದೆ? ಒಳ್ಳೆಯ ಕ್ಯಾಮೆರಾ ಇದ್ದರೆ ಸಾಕಾ? ಅಥವಾ ಛಾಯಾಗ್ರಾಹಕನಿಗೆ ಒಳ್ಳೆಯ ಕೌಶಲ್ಯ ಇರಬೇಕಾ? ಎನ್ನುವ ಪ್ರಶ್ನೆಗಳು ಬಹಳಷ್ಟು ಜನರ ಮನದಲ್ಲಿ ಮೂಡಬಹುದು. ಒಬ್ಬ ನಿಪುಣ ಚಿತ್ರಕಾರನಿಗೆ ಒಂದು ಚಂದದ ಚಿತ್ರ ಬಿಡಿಸಲು ಸಾವಿರಾರು ರೂಪಾಯಿ ಬೆಲೆಯ ಬಣ್ಣಗಳೇ ಬೇಕಾಗಿಲ್ಲ. ಕೈಗೆ ಸಿಕ್ಕ ಬಣ್ಣಗಳಲ್ಲೇ ಆತ ತನ್ನ ಕಲೆಯ ಝಲಕ್ ಅನ್ನು ತೋರಿಸಿಬಿಡುತ್ತಾನೆ. ಆದರೆ ಆತನಿಗೇ ಒಳ್ಳೆಯ ಸಲಕರಣೆಗಳು ದೊರೆತಲ್ಲಿ ಮಾಯಕಲೋಕವನ್ನೇ ಸೃಷ್ಟಿಸಬಲ್ಲ. ಚಿತ್ರ ಬಿಡಿಸಲು ಬಾರದವನಿಗೆ ಏನು ಕೊಟ್ಟರೂ ʼನೆಲ ಡೊಂಕುʼ ಎಂದಾಗಿಬಿಡುತ್ತದೆ. ಹಾಗೆಯೇ ಫೋಟೋಗ್ರಾಫಿಯಲ್ಲಿ ಕೂಡ. ನನ್ನ ಪ್ರಕಾರ ಒಂದು ಚಿತ್ರ ಬಹುಚಂದವಾಗಿ ಬರಲು ಬಹಳಷ್ಟು ಸಂಗತಿಗಳು ಮುಖ್ಯವಾಗಬಹುದು. ಒಳ್ಳೆಯ ಕಾಮೆರಾ, ಛಾಯಾಗ್ರಾಹಕನ ಕೌಶಲ್ಯ, ತಾಳ್ಮೆ, ಸರಿಯಾದ ಸಮಯ, ಅಳತೆ ಮೀರದ ಪೋಸ್ಟ್ ಪ್ರೊಸೆಸಿಂಗ್, ಕಲರಿಂಗ್ ಹೀಗೆ ಬಹಳಷ್ಟು ವಿಷಯಗಳು ಒಂದು ಫೋಟೋದ ಹಿಂದೆ ಇರಬಹುದು.
ಮೇಲೆ ಹೇಳಿದೆನಲ್ಲ. ನನಗೆ ಕ್ಯಾಂಡಿಡ್ ಫೋಟೋಗ್ರಾಫಿಯೆಂದರೆ ಬಹಳ ಇಷ್ಟ ಅಂತ. ಜನರಿಗೆ ಗೊತ್ತಾಗದಂತೆ ಅವರ ಆ ಫೋಟೋಗಳನ್ನು ತೋರಿಸಿದಾಗ ಅವರ ಮುಖ ಅರಳುವುದನ್ನು ನೋಡಬೇಕು ನೀವು. ಫೋಟೋಗ್ರಾಫಿಯಲ್ಲಿ ಬಹಳ ಖುಷಿ ಕೊಡುವ ಸಂದರ್ಭ ಅದು. ಯಾರನ್ನೋ ಒಂದು ಕಡೆ ನಿಲ್ಲಿಸಿ ಫೋಟೋ ತೆಗದಾಗ ಅವರಿಗೆ ಫೋಟೋ ಹೀಗೆಯೇ ಬರಬಹುದು ಎಂಬ ನಿರೀಕ್ಷೆ ಇರುತ್ತದೆ. ಆದರೆ ಕ್ಯಾಂಡಿಡ್ ಫೋಟೋಗಳೆಂದರೆ ಹಾಗಲ್ಲ. ಹೀಗೊಂದು ಫೋಟೋ ಬರಬಹುದು ಎಂಬ ನಿರೀಕ್ಷೆಯೇ ಇಲ್ಲದಿದ್ದಾಗ ಆಗುವ ಸಂತಸ ಅಂತಿಂಥದ್ದಲ್ಲ. ಫೋಟೋಗಳು ಖುಷಿಯನ್ನು ಹಂಚುವ ಮಾಧ್ಯಮವೂ ಹೌದು. ಹಾಗೆಯೇ ನೆನಪನ್ನು ಕಾಪಿಡುವ ಸಾಧನವೂ ಹೌದು.
ಚಂದನ ಭಟ್ ಕೋಣೆಮನೆ
30 ಜನವರಿ 2023