ಯಾವುದೋ ಒಂದು ಬೋರಿಂಗ್ ಕ್ಲಾಸು. ಯಾಕಾದರೂ ಈ ಸಬ್ಜೆಕ್ಟ್ ಇದೆಯೋ ಎಂದು ಗೊಣಗುತ್ತಾ, ನಡುನಡುವೆ ತೂಕಡಿಸುತ್ತಾ ಕೂತಾಗ ಕಣ್ಣು ಹೊರಡುವುದು ಕ್ಲಾಸಿನ ಹೊರಗೆಯೇ. ಕ್ಲಾಸಿನೊಳಗಿನ ಕೊರೆತಕ್ಕೆ ಸ್ವಲ್ಪ ಸಮಾಧಾನ ನೀಡುವುದು ಈ ಕಿಟಕಿ, ಬಾಗಿಲಿನಾಚೆಗಿನ ಲೋಕ. ಕಾರಿಡಾರಿನಲ್ಲಿ ಏನೋ ಹರಟುತ್ತಾ ತಿರುಗಾಡುವ ಒಂದಿಷ್ಟು ಜನರು. ಒಂದೆರಡಾದರೂ ಚಂದ ಹುಡುಗಿಯರು ಕಂಡಾರೋ ಎಂದು ಇಣುಕಿ ನೋಡುವ ಕಣ್ಣುಗಳು. ನೋಡ್ಬೇಕ್ರೀ. ಈ ವಯಸ್ಸಲ್ಲಲ್ಲದೇ ಇನ್ಯಾವಾಗ ನೋಡೋದು. ಕೆಲವೊಂದು ಬಾರಿ ಅಬ್ಬಾ! ಇವರು ನಮ್ಮ ಕಾಲೇಜಿನವರಾ ಮಾರ್ರೆ! ಇವತ್ತೇ ಮೊದಲು ಇವರನ್ನ ನೋಡ್ತಾ ಇರೋದು ಅನ್ನುವ ಹಾಗೆ ಅಪರೂಪಕ್ಕೆ ಕಾಣಿಸಿಕೊಳ್ಳುವವರೂ ಇದಾರೆ.
ಕ್ರಶ್ಶು! ಮೊನ್ನೆ ಒಬ್ರು ಕೇಳ್ತಿದ್ರು 'ಯಾರು ನಿನ್ನ ಕ್ರಶ್' ಅಂತ. ಬಹುಶಃ ಬಹಳ ಕಷ್ಟ ಪ್ರಶ್ನೆ ಇದು. ರೋಡಲ್ಲಿ ಹೋಗುವಾಗ, ಕಾಲೇಜು ಕಾರಿಡಾರಿನಲ್ಲಿ ಅಡ್ಡಾಡುವಾಗ, ಕ್ಲಾಸಿನಿಂದ ಹೊರಗೆ ಕಣ್ಣಾಡಿಸಿ ನೋಡುವಾಗ ಕಾಣುವ ಒಂದಿಷ್ಟು ಹುಡುಗಿಯರ ಮೇಲೆ ಕ್ರಶ್ ಆಗಬಹುದು. ಆ ಕ್ಷಣದಲ್ಲಿ ವಾರೆಗಣ್ಣಲ್ಲಿ ಅವರನ್ನು ನೋಡಿ ಕಣ್ತುಂಬಿಸಿಕೊಳ್ಳಬೇಕಷ್ಟೇ. ಅವರ ಹೆಸರು, ಪಿನ್ ಕೋಡು, ವಾಟ್ಸಪ್ ನಂಬರ್ರು ಇದರ ಬಗ್ಗೆ ಎಲ್ಲಾ ತಲೆಕೆಡಿಸಿಕೊಳ್ಳುವುದು ಬಹುದೂರವೇ. ಈ ಕ್ರಶ್ಶು ಮತ್ತು ಲವ್ವುಗಳ ನಡುವಿನ ವ್ಯತ್ಯಾಸದ ಬಗ್ಗೆ ಒಂದು ಸಂಶೋಧನೆ ಮಾಡಬಹುದೇನೋ. ಲವ್ವೆಂದರೆ ಸೀರಿಯಸ್ ಕೇಸು. ಕ್ರಶ್ ಹಾಗಲ್ಲ. ಅದು ಹಲವರ ಮೇಲೆ ಆಗ್ತಾ ಇರತ್ತೆ. ಪ್ರಪೋಸು, ಡೇಟು ಗೀಟು ಎನ್ನುವ ತಾಪತ್ರಯವೂ ಇಲ್ಲ. ಜೇಬಿಗೆ ಕತ್ತರಿಯೂ ಇಲ್ಲ. ಕಣ್ಣಿಗೆ ಮಾತ್ರ ಪುಕ್ಕಟೆಯಾಗಿ ತಂಪು! ನೋಡ್ತಾ ಇರೋದಷ್ಟೇ.
ಅದರಲ್ಲೂ ಕಾಲೇಜಿಗೆ ಜ್ಯೂನಿಯರ್ ಗಳು ಸೇರಿದಾಗ ಕಣ್ಣುಗಳಂತೂ ಕಾರಿಡಾರ್ ಕಡೇನೇ ಇರತ್ವೆ. ಹೇಗಿದಾರೆ ಅಂತ ನೋಡಬೇಕಲ್ವ. ಅಯ್ಯೋ! ಬರೀ ಕಾಲೇಜು ಕ್ರಶ್ಶುಗಳ ಬಗ್ಗೆ ಮಾತ್ರ ಹೇಳ್ತಾ ಇದೀನಲ್ಲ. ಶಾಲೆಯಲ್ಲೆಲ್ಲೂ ಯಾರ ಮೇಲೂ ಕ್ರಶ್ ಆಗಲ್ವ ಅಂತ ಕೇಳಿದ್ರೆ, ಅಲ್ಲೂ ಇತ್ತು ಬಿಡ್ರೀ. ಬಹುಷಃ ಹೈಸ್ಕೂಲು ಮೆಟ್ಟಿಲು ಹತ್ತಿದಾಗ ಕಾಯ್ಕಿಣಿ ಹಾಡುಗಳು ತಲೆಯಲ್ಲಿ ಪ್ಲೇ ಆಗಲು ಶುರುವಾಗಿದ್ದು. ಆವಾಗೆಲ್ಲಾ ಲಿಮಿಟೆಡ್ ಕ್ರಶ್ ಗಳು. ಶಾಲೆಯಲ್ಲಿ ಇರೋದೇ ಎಪ್ಪತ್ತು ಎಂಬತ್ತು ಜನರು. ಈಗೆಲ್ಲಾ ಎರ್ರಾಬಿರ್ರಿ ದಿನಕ್ಕೊಂದ್ ಹತ್ತು ಜನ ಕಾಣ್ತಾರೆ. ಆವಾಗ ಕ್ರಶ್ ಎನ್ನುವ ಪದವೂ ಗೊತ್ತಿತ್ತೋ ಏನೋ. ಅವ್ಳು ಯಾಕೋ ಇಷ್ಟ ಆಗ್ತಿದಾಳಲ್ಲ ಅನ್ನೋದೊಂದು ಗೊತ್ತಾಗ್ತಿತ್ತು ಅಷ್ಟೇ. ಅಕಸ್ಮಾತ್ತಾಗಿ ಅವಳು ನನ್ನ ಕಡೆ ನೋಡಿ ಒಂಚೂರು ಸ್ಮೈಲ್ ಕೊಟ್ಟರೆ ಸಾಕು. ದಿನವಿಡೀ ಖುಷ್! ರಿಷಭ್ ಶೆಟ್ರ ಕಾಸರಗೋಡು ಪಿಚ್ಚರಲ್ಲಿ ಇದ್ದಂಗೆ! ಆ ದಿನವು ಎಷ್ಟೇ ಕೆಟ್ಟದಾಗಿದ್ದರೂ ಕ್ರಶ್ ಎಂಬ ಮಾಯೆಯ ನಗು ನಮ್ಮಲ್ಲೊಂದು ಉತ್ಸಾಹ ಬರುವ ಹಾಗೆ ಮಾಡಿಬಿಡತ್ತೆ. ಹೇಳುತ್ತಾ ಹೋದರೆ ಹಾಗೆಲ್ಲಾ ಮುಗಿಯುವ ಕತೆಯಾ ಮಾರ್ರೆ ಇದು! ಇನ್ನೇನು ಕ್ಲಾಸು ಮುಗಿದು ಬೆಲ್ ಆಗಲಿಕ್ಕಾಯ್ತು. ಸಿಗೋಣವಂತೆ.
ಚಂದನ
03 ಜನವರಿ 2023